ಪರೋಪಜೀವನ - 
	ತಮ್ಮ ನೆಲೆ ಮತ್ತು ಆಹಾರಕ್ಕಾಗಿ ಒಂದು ಜೀವಿ ಅಥವಾ ಜೀವಿಗಳ ಗುಂಪು ಇನ್ನೊಂದು ಜೀವಿ ಅಥವಾ ಜೀವಿಗಳ ಗುಂಪನ್ನು ಅವಲಂಬಿಸಿ ನಿಕಟ ದೈಹಿಕ ಹಾಗೂ ಜೈವಿಕ ಸಹವಾಸವನ್ನು ಪಡೆದಿರುವ ಸ್ಥಿತಿ (ಪ್ಯಾರಸೈಟಿಸಮ್). ಪರಾವಲಂಬಿಜೀವನ, ಪರಿಪಿಂಡಿತ್ವ ಪರ್ಯಾಯ ನಾಮಗಳು. ಜೀವಿಗಳು ತಮ್ಮ ಜೀವನನಿರ್ವಹಣೆಗಾಗಿ  ಆಹಾರವನ್ನು ದೊರಕಿಸಿಕೊಳ್ಳಬೇಕಷ್ಟೆ. ಹಾಗೆ ದೊರಕಿಸಿಕೊಳ್ಳಲು ನಾಲ್ಕು ಮಾರ್ಗಗಳು ಲಭ್ಯವಿವೆ : ಸಸ್ಯ ಮಾರ್ಗ, ಪ್ರಾಣಿ ಮಾರ್ಗ, ಬೂಷ್ಟು ಅಣಬೆ ಮಾರ್ಗ ಮತ್ತು ಪರೋಪಜೀವನ ಮಾರ್ಗ. ಸಸ್ಯಗಳು ಸ್ಥಿರಜೀವಿಗಳು ತಮ್ಮ ನೆಲೆಯಲ್ಲಿ ದೊರೆಯುವ ನೀರು, ಇಂಗಾಲ ಡೈಆಕ್ಸೈಡ್, ಲವಣಗಳು ಮುಂತಾದ ಸರಳ ರಚನೆಯ ರಾಸಾಯನಿಕಗಳಿಂದ ಮತ್ತು ಸೂರ್ಯರಶ್ಮಿ ಶಕ್ತಿಯ ಬಳಕೆಯಿಂದ ಜಟಿಲ ರಚನೆಯ ರಾಸಾಯನಿಕಗಳನ್ನು ಸಂಶ್ಲೇಷಿಸಿ ಕೊಳ್ಳುತ್ತವೆ. ಇಂಥ ಸಂಶ್ಲೇಷಣೆಗಳು ಅಧಿಕ ಸಂಖ್ಯೆಯಲ್ಲಿವೆ. ವೈವಿಧ್ಯಪೂರ್ಣವಾಗಿಯೂ ಇವೆ. ಪ್ರೋಟಿನ್, ಶರ್ಕರಗಳು, ಮೇದಸ್ಸು, ಜೀವಸತ್ವಗಳು ಮುಂತಾದ ಬಗೆಬಗೆಯ ರಾಸಾಯನಿಕ ಗುಂಪುಗಳಿಗೆ ಸೇರಿದ ವಸ್ತುಗಳು ಉತ್ಪಾದನೆ ಆಗುತ್ತವೆ ಇವು ಸಸ್ಯಗಳ ಆಹಾರ ಆಗಿರುವುವಲ್ಲದೆ ಹೆಚ್ಚುವರಿ ವಸ್ತುಗಳು ಬೇರು. ಕಾಂಡ, ಎಲೆ ಫಲ (ಹೂವು, ಕಾಯಿ ಹಣ್ಣು ಬೀಜ ಇತ್ಯಾದಿ) ಮುಂತಾದ ವಿವಿಧ ಭಾಗಗಳಲ್ಲಿ ಸಂಗ್ರಹವಾಗಿಯೂ ಇರುತ್ತವೆ. ಸಸ್ಯಾಹಾರಿ ಪ್ರಾಣಿಗಳು ಸಸ್ಯಗಳನ್ನು ಆಹಾರವಾಗಿ ಕಬಳಿಸಿ ಅವುಗಳಲ್ಲಿರುವ ಮೇಲೆ ಹೇಳಿದ ರಾಸಾಯನಿಕ ವಸ್ತುಗಳನ್ನು ಪಚನ ಹಾಗೂ ಉಪಾಪಚಯ (ಮೆಟಬಾಲಿಸಮ್) ಕ್ರಿಯೆಗಳಿಂದ ಬೇಕಾದಂತೆ ಮಾರ್ಪಡಿಸಿಕೊಂಡು ತಮ್ಮ ಜೈವಿಕ ಕ್ರಿಯೆಗಳಿಗಾಗಿ ಬಳಸಿಕೊಂಡು ಬೆಳೆಯುತ್ತವೆ. ಮಾಂಸಾಹಾರಿ ಪ್ರಾಣಿಗಳು ಸಸ್ಯಾಹಾರಿ ಪ್ರಾಣಿಗಳನ್ನು ತಿಂದು ತಮ್ಮ ಆಹಾರ ಅಗತ್ಯವನ್ನು ಪೂರೈಸಿಕೊಳ್ಳುತ್ತವೆ. ಹೀಗೆ ಈ ಎರಡು ಬಗೆಯ ಪ್ರಾಣಿಗಳಿಗೂ ಪ್ರೋಟೀನ್ ಇತ್ಯಾದಿ ವಸ್ತುಗಳು ತಯಾರಾಗಿ ಸಿದ್ಧವಾಗಿಯೇ ಇರುವ ಸಸ್ಯ ಅಥವಾ ಪ್ರಾಣಿಗಳನ್ನು ಆಹಾರವೆಂದು ಗಣಿಸಿ ಅದರ ಸಂಪಾದನೆಗಾಗಿ ಅಲ್ಲಲ್ಲಿ ಅರಸುತ್ತ ಅಲೆಯುವುದು ಅವುಗಳ ವೈಶಿಷ್ಟ್ಯ ಸತ್ತಿರುವ ಅಥವಾ ಸಾಯುತ್ತಿರುವ ಜೀವಿಗಳು ಅಥವಾ ಅವುಗಳ ಉತ್ಪನ್ನಗಳಿಂದ ಆಹಾರ ಪಡೆಯುವುದು ಅಣಬೆ ಬೂಷ್ಟುಗಳ ರೀತಿ. ಒಂದು ಜೀವಿಯ ಒಳಗೆ ಅಥವಾ ಮೇಲೆ ನೆವಸಿತಾವಿದ್ಧ ಕಡೆಯೇ ತಮ್ಮ ಅತಿಥೇಯ ತಯಾರಿಸುವ ಆಹಾರವನ್ನು ಪಡೆಯುವುದು ಪರಾವಲಂಬಿ ಜೀವಿಗಳ ವೈಯಕ್ತಿಕತೆ.

	ಅಂದರೆ ಸಸ್ಯಗಳನ್ನು ಬಿಟ್ಟರೆ ಮಿಕ್ಕ ಜೀವಿಗಳೆಲ್ಲವೂ ತಮ್ಮ ಆಹಾರಕ್ಕಾಗಿ ಸಸ್ಯಗಳನ್ನೋ ಪ್ರಾಣಿಗಳನ್ನೋ ಅವುಗಳ ಅವಶೇಷಗಳನ್ನೋ ಅವಲಂಬಿಸಿಕೊಂಡಿರುವುದೇ ಸಾಮಾನ್ಯ ಪರಿಸ್ಥಿತಿ. ಪ್ರಾಣಿಗಳು ಓಡಾಡಿಕೊಂಡು ಏನೂ ಅಡಚಣೆ ಇಲ್ಲದೆ ದೊರೆಯುವ ಆಹಾರವನ್ನು ಸೇವಿಸುವುದೂ ಅಡಚಣೆ ಪ್ರತಿಭಟನೆಗಳು ಏನಾದರೂ ತೋರಿಬಂದರೆ ಉಪಾಯ ಒಲುಮೆಗಳಿಂದ ಅವನ್ನು ನಿವಾರಿಸಿಕೊಂಡು ಆಹಾರ ದೊರಕಿಸಿಕೊಳ್ಳುವುದೂ ಸಾಧಾರಣ ರೀತಿ. ಎರಡು ಪ್ರತ್ಯೇಕ ಗುಂಪುಗಳಿಗೆ ಸೇರಿದ ಜೀವಿಗಳು ಒಂದರೊಡನೆ ಇನ್ನೊಂದು ನಿಕಟ ಸಂಬಂಧ ಹೊಂದಿದ್ದು (ಪ್ರಧಾನವಾಗಿ ಪ್ರತ್ಯಕ್ಷ ಅಥವಾ ಪರೋಕ್ಷ ಆಹಾರ ಸಂಪಾದನೆಗಾಗಿಯೇ) ಒಂದುಗೂಡಿ, ಒಂದಕ್ಕೊಂದು ಪರಸ್ಪರ ಸಹಾಯಕವಾಗಿ ಬಾಳುವುದೂ ಇದೆ. ತಮ್ಮ ನೆಲೆಗಾಗಿ ಮಾತ್ರ ಇನ್ನೊಂದು ಪ್ರಾಣಿ ಅಥವಾ ಸಸ್ಯವನ್ನು ಆಕ್ರಮಿಸಿಕೊಂಡು ಆಹಾರ ಸಂಪಾದನೆಗೆ ಸ್ವಾವಲಂಬಿಗಳಾಗಿರುವುದೂ ಉಂಟು. ಅನೇಕ ಸಂದರ್ಭಗಳಲ್ಲಿ ಇವನ್ನೂ ಒಂದು ರೀತಿಯ (ಬಾಹ್ಯ) ಪರೋಪಜೀವಿಗಳೆಂದೇ ಗಣಿಸುವುದೂ ಇದೆ. ಒಟ್ಟಿನಲ್ಲಿ ಒಂದು ಜೀವಿ ಇನ್ನೊಂದನ್ನು ಅವಲಂಬಿಸಿಕೊಂಡಿರುವ ವಿಧಾನಗಳನ್ನು ಇಂಥಿಂಥವೇ ಸರಿ ಎಂದು ನಿರ್ದಿಷ್ಟವಾಗಿ ವಿಂಗಡಿಸುವುದು ಕಷ್ಟ. ಪರೋಪಜೀವಿ ಏಕಾಂಕಿಯಾಗಿ ಇಲ್ಲವೆ ಗುಂಪಾಗಿ ಒಂದು ಅತಿಥೇಯ ಜೀವಿಯನ್ನು ಅವಲಂಬಿಸಿಕೊಂಡಿರುವುದು ಸಾಮಾನ್ಯ. ಒಂದೇ ಪರೋಪಜೀವಿ ಅನೇಕ ಅತಿಥೇಯ ಜೀವಿಗಳನ್ನು ಆಕ್ರಮಿಸುವುದು ಅಪರೂಪ. ಸಸ್ಯಗಳಲ್ಲಿ ಈ ಬಗೆಗಳು ಸ್ಪಷ್ಟವಾಗಿ ವ್ಯಕ್ತವಾಗಿದೆ. ಬಂದಿಳಿಕೆ ಮತ್ತು ಗಂಧದಮರ ಇವನ್ನು ಉದಾಹರಣೆಗಳಾಗಿ ಈ ಬಗ್ಗೆ ಉಲ್ಲೇಖಿಸಬಹುದು. ಏವಂಚ ಸಸ್ಯಜೀವನದಲ್ಲಿ ಪರಾವಲಂಬನೆ ಅಪರೂಪವಾದದ್ದೆ. ಪ್ರಾಣಿಗಳಲ್ಲಿ ಪರಾವಲಂಬನೆ ಹೆಚ್ಚು ಸಾಮಾನ್ಯವಾಗಿದ್ದರೂ ಅತಿಥೇಯ ಪರೋಪಜೀವಿಗಳ ಸಂಬಂಧ ಸ್ಪಷ್ಟವಾಗಿಲ್ಲ. ಒಂದು ಪರೋಪಜೀವಿ ಅಥವಾ ಗುಂಪು ದೈಹಿಕ ಬೆಳೆವಣಿಗೆಯ ಪೂರ್ಣತೆಗಾಗಿ ಮತ್ತು ಇತರ ನೈಸರ್ಗಿಕ ಅಗತ್ಯಕ್ಕಾಗಿ ಎರಡು ಅತಿಥೇಯ ಪ್ರಾಣಿಗಳನ್ನು ಅವಲಂಬಿಸಿರುವುದೂ ಆಹಾರಕ್ಕಾಗಿ ಅನೇಕ ಅತಿಥೇಯ ಪ್ರಾಣಿಗಳನ್ನು ಅವಲಂಬಿಸಿರುವುದೂ ಅನೇಕ ಸಂದರ್ಭಗಳಲ್ಲಿ ಕಂಡುಬರುತ್ತದೆ. ಪ್ರಕೃತದಲ್ಲಿ ಪರೋಪಜೀವನವೆಂದರೆ ಒಂದು ಪ್ರಾಣಿ ವ್ಯಕ್ತಿಯ ದೇಹದ ಒಳಗೆ ಇದ್ದು ಆತನ ರಕ್ತವನ್ನೂ ಕರುಳಿನಲ್ಲಿ ಪಚನಗೊಂಡಿರುವ ಆಹಾರವನ್ನೂ ದುಗ್ಧರಸವನ್ನೊ ಆಹಾರವಾಗಿ ಬಳಸುವ ಜೀವನವನ್ನು ವಿವರಿಸುವುದಾಗಿದೆ.

	ಪರೋಪಜೀವನ ನಡೆಸುವ ಪ್ರಾಣಿ ಆಹಾರಸಂಪಾದನೆಗೆ ಓಡಾಡುವುದೂ ಹೊಡೆದಾಡುವುದೂ ಅವಶ್ಯವಲ್ಲ. ಆದ್ದರಿಂದ ಚಲನಾಂಗಗಳ ಅಗತ್ಯ ಬಳಕೆಗಳು ಕಡಿಮೆ ಆಗುತ್ತ ಎಷ್ಟೋ ಪರೋಪಜೀವಿಗಳಲ್ಲಿ ಅವುಗಳ ಸುಳಿವೂ ಇಲ್ಲವಾಗಿರುತ್ತದೆ. ಒಂದು ಸ್ಥಳದಲ್ಲಿ ನೆಲೆಯಾಗಿ ನಿಂತು ಆಹಾರವನ್ನು ಹೀರಿಕೊಳ್ಳುವ ವಿಧಾನವನ್ನು ಈ ಪ್ರಾಣಿಗಳು ಸಾಮಾನ್ಯವಾಗಿ ರೂಢಿಸಿಕೊಂಡಿರುತ್ತವೆ. ಆದ್ದರಿಂದ ರಕ್ತ ಮತ್ತಿತರ ಅತಿಥೇಯ ದೇಹದ್ರವಗಳು ತಮ್ಮನ್ನು ಕೊಚ್ಚಿಕೊಂಡು ಹೋಗದಂತೆ ಇವು ತಮ್ಮ ಬಾಯಿಯ ನೆರೆಯಲ್ಲಿಯೇ ಚೂಷಕವನ್ನೊ ಕೊಕ್ಕೆಯನ್ನೋ ಹೊಂದಿದ್ದು ಅವುಗಳಿಂದ ನೆಲೆಗೆ ಗಟ್ಟಿಯಾಗಿ ಕಚ್ಚಿಕೊಂಡಿರುತ್ತವೆ. ಇವುಗಳಿಗೆ ಪಚನವಾದ ಆಹಾರವೇ ದೊರೆಯುವುದರಿಂದ ಈ ಸ್ಥಿತಿಯಲ್ಲಿ ಪಾಚಕಾಂಗಗಳು ಅನವಶ್ಯವಾಗಿದ್ದ ಪರೋಪಜೀವಿಗಳ ಜೀರ್ಣಾಂಗಗಳು ಹೆಚ್ಚು ಕಡಿಮೆ ಮಾಯವಾಗಿರುತ್ತವೆ.

	ಜೀವನಧಾರಣೆ ಮತ್ತು ಪ್ರಜನನ ಕ್ರಿಯೆ ಇವೆರಡೇ ಜೀವಿಯ ಪ್ರಧಾನ ಜೈವಿಕ ಕ್ರಿಯೆಗಳಾಗಿರುವುದು ಸರಿಯಷ್ಟೆ. ಜೀವನಧಾರಣೆಗೆ ಆಹಾರ, ಆಹಾರಸಂಪಾದನೆಗೆ ಶಕ್ತಿ, ಶಕ್ತಿಯ ಉತ್ಪಾದನೆಗೆ ಆಮ್ಲಜನಕದ ಪೂರೈಕೆ, ಪ್ರಾಸಗಿಂಕವಾಗಿ ಉದ್ಭವಿಸಿದ ಅನುಪಯುಕ್ತ ವಸ್ತುಗಳ ವಿಸರ್ಜನೆ ಇವು ಒಂದಕ್ಕೊಂದು ಸೇರಿಕೊಂಡಿರುವ ಜೈವಿಕ ಕ್ರಿಯಾಸರಪಣಿಯ ಕೊಂಡಿಗಳು. ಇವನ್ನು ಬೆಸೆಯುವುದು ರಕ್ತಪರಿಚಲನೆ. ಸಮಗ್ರ ಜೀವನಕ್ರಮ ಸುಸಂಘಟಿತವಾಗಿರುವಂತೆ ಮಾಡುವುದು ನರಮಂಡಲ. ಪರಾವಲಂಬಿ ಜೀವನದಲ್ಲಿ ಯಾವಾಗ ಆಹಾರಕ್ಕೆ ಕಷ್ಟ ಪಡಬೇಕಾಗಿಯೇ ಇರುವುದಿಲ್ಲವೋ ಆಗ ಈ ಕೊಂಡಿಗಳ ಅಗತ್ಯವೂ ಕಡಿಮೆ. ಹೀಗಾಗಿ ಪರೋಪಜೀವನ ಕ್ರಮದಲ್ಲಿ ಶ್ವಾಸಾಂಗಗಳು, ವಿಸರ್ಜನಾಂಗಗಳ, ರಕ್ತ, ರಕ್ತಪರಿಚಲನೆ, ಹೃದಯ ಇವುಗಳ ಬಳಕೆ ಕಡಿಮೆ ಆಗುತ್ತ ಬಂದು ಅವೂ ಹೆಚ್ಚು ಕಡಿಮೆ ನಿರ್ನಾಮವಾಗುವುದು ಇದೆ. ಇವುಗಳ ಕ್ರಿಯೆಗಳನ್ನೆಲ್ಲ ಸಕ್ರಮವಾಗಿ ಸಂಘಟಿಸಬೇಕಾಗಿರುವ ಅಗತ್ಯವೂ ಇಲ್ಲದೆ ನರಮಂಡಲ ಕೂಡ ತೀರ ಸರಳವಾಗಿದೆ.

	ಇನ್ನು ಪ್ರಜನನ ಕ್ರಿಯೆಯ ವಿಚಾರ. ಪರೋಪಜೀವನ ಕ್ರಮದಲ್ಲಿ ಇದೇ ಒಂದು ವಿಶೇಷ. ಜೀವಿ ಸಂತಾನವನ್ನು ಪಡೆಯುವುದಲ್ಲದೆ ಸಂತಾನವೂ ಸುಲಭವಾಗಿ ತನ್ನ ಜೀವನವನ್ನು ಮುಂದುವರಿಸಿ ಮರುಸಂತಾನ ಪಡೆಯುತ್ತ ಹೋಗಬೇಕಾದುದು ಜೀವನದ ನೈಸರ್ಗಿಕತೆಯ ಕ್ರಮ. ಅಂದರೆ ಪರೋಪಜೀವನದಲ್ಲಿ ಅಂಥ ಜೀವಿ ಸಂತಾನವನ್ನು ಪಡೆದಾಗ ಸಂತಾನಕ್ಕೂ ಅದರ ವಿಶಿಷ್ಟವಾದ ಪರೋಪಜೀವನ ಲಭಿಸಬೇಕಾದ್ದು ಅವಶ್ಯಕ. ಸಂತಾನವೂ ಜನ್ಮದಾತ ವ್ಯಕ್ತಿ ಇದ್ದ ಕಡೆಯೇ ಇರಬಹುದಾದರೂ ಆಹಾರಕ್ಕೆ ಈ ಪೀಳಿಗೆಗಳಲ್ಲಿ ಪರಸ್ಪರ ಪೈಪೋಟಿ ನಡೆಸಬೇಕಾಗಿ ಬರಬಹುದು. ಅಂಥ ಸಂದರ್ಭಗಳು ವಿರಳ. ಆದ್ದರಿಂದ ಸಂತಾನವನ್ನು ಅತಿಥೇಯ ದೇಹವನ್ನು ಹೋಗುವಂತೆ ಏರ್ಪಡಬೇಕು. ಹೊರಹಾಕಲ್ಪಟ್ಟ ಸಂತಾನಕ್ಕೆ ವಿಶಾಲ ಪ್ರಪಂಚದಲ್ಲಿ ವಿಶಿಷ್ಟ ಅತಿಥೇಯ ದೊರಕುವುದು ದುರ್ಲಭ. ಅದು ಆಕಸ್ಮಿಕ ಘಟನೆಯಾಗಿಯೇ ಪರಿಣಮಿಸಬಹುದು. ಈ ಸವಾಲನ್ನು ಎದುರಿಸಲು ಮಾತೃಜೀವಿಯಿಂದ ಅಸಂಖ್ಯಾತ ಸಂತಾನೋತ್ಪತ್ತಿ ಆಗುತ್ತದೆ. ಈ ಸಂತಾನಗಳ ಪೈಕಿ ಒಂದೆರಡಕ್ಕಾದರೂ ತಕ್ಕ ಅತಿಥೇಯ ಪ್ರಾಣಿ ದೊರೆತು ಸಂತತಿ ಮುಂದುವರಿಯುವುದು ಸಾಧ್ಯವಾಗುತ್ತದೆ. ಇಂಥ ಅಸಂಖ್ಯಾತ ಸಂತಾನೋತ್ಪತ್ತಿಗಾಗಿ ಅನೇಕ ಪರೋಪಜೀವಿಗಳಲ್ಲಿ ಪ್ರಜನನಾಂಗಗಳೇ ಪ್ರಧಾನ ಅಂಗಗಳಾಗಿದ್ದು ಮಿಕ್ಕವು ಭಾಗಶಃ ಅಥವಾ ಪೂರ್ಣವಾಗಿ ಲುಪ್ತವಾಗಿ ಇರುತ್ತವೆ. ಜೀವನವನ್ನು ಪ್ರಾರಂಭಿಸುವ ಪರೋಪಜೀವಿಗೆ ಅಗತ್ಯ ಅತಿಥೇಯ ದೊರೆಯುವ ಆಕಸ್ಮಿಕವನ್ನು ಸ್ಪಲ್ಪಮಟ್ಟಿಗೆ ಸುಲಭಗೊಳಿಸಲು ಎರಡು ಆತಿಥೇಯಗಳನ್ನು ಅವಲಂಬಿಸುವ ಮಾರ್ಗವೂ ವಿಕಸಿಸಿದೆ. 

	ಪರೋಪಜೀವನ ಕ್ರಮದಿಂದ ಪರೋಪಜೀವಿಗೆ ಅನೇಕ ಸೌಲಭ್ಯ ಕಷ್ಟಗಳು ಒದಗುವುದೂ ಕಷ್ಟಗಳು ಪರಿಹಾರವಾಗುವುದೂ ಮೇಲೆ ಹೇಳಿದ ವಿಷಯಗಳಿಂದ ಸ್ಪಷ್ಟಪಡುತ್ತದೆ. ಪರೋಪಜೀವನ ಕ್ರಮದಿಂದ ಅತಿಥೇಯ ಜೀವಿಯಲ್ಲೂ ವಿವಿಧ ಪರಿಣಾಮಗಳು ಕಂಡುಬರುವುದುಂಟು ಯಾವ ಪರಿಣಾಮವೊ ಇಲ್ಲದೇ ಇರಬಹುದು ; ಅತಿಥೇಯ ವ್ಯಕ್ತಿ ಕಷ್ಟಬಿದ್ದು ತನ್ನ ಹಾಗೂ ತನ್ನನ್ನು ಅವಲಂಬಿಸಿರುವುದು ಪ್ರಾಣಿಯ ಅಗತ್ಯಗಳನ್ನು ಪೂರೈಸಿಕೊಳ್ಳುವಂತಿರಬಹುದು ; ಇಲ್ಲವೆ ಪರೋಪಜೀವಿ ಅತಿಥೇಯ ವ್ಯಕ್ತಿಗೆ ತೊಂದರೆಯನ್ನೇ ಉಂಟುಮಾಡಬಹುದು. ತೊಂದರೆ ಆದರೂ ಶೀಘ್ರವಾಗಿ ಮರಣವನ್ನು ಉಂಟುಮಾಡುವ ತೊಂದರೆ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಏಕೆಂದರೆ ಹಾಗೆ ಅತಿಥೇಯ ಪ್ರಾಣಿಯ ಜೀವ ಹೋಗುವುದು ಪರೋಪಜೀವಿಯ ಜೀವನಕ್ಕೇ ಕುತ್ತು. ಅತಿಥೇಯ ಪ್ರಾಣಿ ಸಾಯುವುದರಿಂದಲೇ ಪರೋಪಜೀವಿಯ ಸಂತಾನ ಪ್ರಸಾರವಾಗಬೇಕಾದ ಸಂದರ್ಭದಲ್ಲಿ ಪರೋಪಜೀವನ ಅತಿಥೇಯ ವ್ಯಕ್ತಿಗೆ ಶೀಘ್ರಮಾರಕವಾಗುವುದು ಸಹಜವೇ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ